ಯಜಮಾನ್

– ಇಮ್ರಾನ್ ಪಾಂಡವರಕಲ್ಲು

ಒಂದು ವ್ಯಾಪಾರ ವಹಿವಾಟಿನ ಮೂಲಕ ಹಲವು ವರುಷಗಳ ಕಾಲ ತನ್ನ ಕೌಟುಂಬಿಕ ಜೀವನವನ್ನು ಮುಂದೆ ಸಾಗಿಸಲು ಪರ ಜಿಲ್ಲೆಯಲ್ಲಿ ಕಷ್ಟ ಪಡುತ್ತಿದ್ದರು ಈ ಯಜಮಾನ. ಜೀವನದಲ್ಲಿ ಹಲವಾರು ಬಾರಿ ಹಿಗ್ಗಿ,ಕುಗ್ಗಿ ಅನೇಕ ಕಷ್ಟ-ಸುಖ ಸಾಧನೆಗಳನ್ನು ಗೈದ ಮೇಧಾವಿ ಇವರು. ತನ್ನ ಸಂಗಾತಿ ಮತ್ತು ಮೂವರು ಮಕ್ಕಳನ್ನು ಸಾಕಲು ಅದೆಷ್ಟೋ ಸಂಕಷ್ಟದ ದಿನಗಳನ್ನು ದೂಡುತ್ತಿದ್ದರು. ಕೆಲ ವಾರಗಳ ರಜೆಗಾಗಿ ಇವರು ಊರಿಗೆ ಬಂದಿದ್ದ ಇವರ ದಿನಗಳು ಹೀಗೆಯೇ ಮುಂದುವರಿಯಿತು. ತಮ್ಮ ಹೊಟ್ಟೆ ತುಂಬಲು ಮತ್ತು ಸಾಲಗಳನ್ನು ತೀರಿಸಲು ಪರ ಜಿಲ್ಲೆಯಲ್ಲಿ ದುಡಿಯುವ ಸಂಭಾವನೆ ಸಾಕಾಗುತ್ತಿಲ್ಲ ಎಂದರಿತ ಈ ಯಜಮಾನ, ಏನೋ ತನ್ನ ಸಂಬಂಧಿಕರ, ಸ್ನೇಹಿತರ ಮಾತು ಕೇಳಿ ಪರ ರಾಷ್ಟ್ರದಲ್ಲಿ ದುಡಿಯುವ ಯೋಜನೆಗೆ ದಾಪುಗಾಲಿಡುವ ಯೋಚನೆ ಮಾಡುತ್ತಾರೆ. ಆ ಯೋಚನೆ ಯೋಜನೆಗೊಂಡು, ತನ್ನ ಸಂಗಾತಿ, ಮಕ್ಕಳ ಜೀವನದ ಉಜ್ವಲ ಭವಿಷ್ಯಕ್ಕಾಗಿ ಊರು ತೊರೆದು ಪರ ದೇಶದಲ್ಲಿ ದುಡಿಯಲು ಮುಂದಾಗುತ್ತಾರೆ.

ತನ್ನ ದುಡಿಯುವ ಸಂಭಾವನೆ ಸಾಕಾಗಲ್ಲ ಎಂಬ ಯೋಚನೆಯೊಟ್ಟಿಗೆ ಇತ್ತ ಕಡೆ ಒಬ್ಬ ಸ್ನೇಹಿತ ‘ಒಂದು ವಿಸಾ ಇದೆ. ಬನ್ನಿ. ಊರಲ್ಲೆಷ್ಟಾದರು ಅಷ್ಟೇ!!’ ಎಂದು ಇವರನ್ನು ಓಲೈಸುವ ಮೂಲಕ ವಿಸಾ ಕಳ್ಸೇ ಬಿಟ್ಟ. ಖುಷಿಯಾಯಿತು ಈ ಯಜಮಾನನಿಗೆ. ವೀಸಾವು ಬಂತು, ಇನ್ನು ಹೋಗೇ ಬಿಡ್ಬೇಕು ಎಂದು ತೀರ್ಮಾನಿಸುತ್ತಾರೆ. ಈ ಯಜಮಾನನಿಗೆ ತನ್ನ ಊರಲ್ಲಿ ಅಷ್ಟೇ ಗೌರವ ಮತ್ತು ಪ್ರತಿಷ್ಠೆ ಇತ್ತು. ಸಾಮಾಜಿಕ ಸೇವಯಲ್ಲಿ ನಿರತನಾಗುವ ಮೂಲಕ ಮನೆಗೂ ಉಪಕಾರಿಯಾಗಿದ್ದು,ಊರಿಗೂ ಉಪಕಾರಿಯಾಗಿದ್ದರು. ಸೌದಿಯಲ್ಲಿ ಒಂದು ರೆಸ್ಟೋರೆಂಟ್ ನ ಜೂಸ್ ಕೌಂಟರ್ ನ ಮ್ಯಾನೇಜರ್ ಎಂಬ ವೀಸಾವನ್ನು ನಿರ್ಲಕ್ಷಿಸಲೂ ಇವರಿಗೆ ಮನ ತೋರಲಿಲ್ಲ. ಮಾತ್ರವಲ್ಲ ತನ್ನ ಪತ್ನಿಯ ಮತ್ತು ಸಂಬಂಧಿಕರ ಬೆಂಬಲದ ನಿಲುವು ಇನ್ನೂ ಇವರನ್ನು ಉತ್ತೇಜಿಸಿತು. ಅಲ್ಪ ವಿದ್ಯಾವಂತರಾಗಿದ್ದ ಇವರು ಪ್ರಾಮಾಣಿಕರಾಗಿದ್ದರು, ಊರವರಿಗೆ ಬೇಕಾದವರಾಗಿದ್ದರು. ಗಟ್ಟಿ ಮನಸ್ಸಿನಿಂದ ಸೌದಿಯಲ್ಲಿ ದುಡಿಯುವ ತೀರ್ಮಾನಕ್ಕೆ ಬಂದರು. ಟಿಕೆಟನ್ನೂ ಮಾಡಿ ಬಿಟ್ಟರು.

Advertisement
Advertisement
Advertisement
Advertisement

ಕೊನೆಗೂ ಪರದೇಶದತ್ತ ಪ್ರಯಾಣಿಸುವ ದಿನ ಸನ್ನಿಹಿತವಾಯಿತು. ಹಲವು ವರುಷಗಳ ಕಾಲ ಎಲ್ಲರನ್ನೂ ಬಿಟ್ಟು ಹೊರ ಜಿಲ್ಲೆಯಲ್ಲಿ ದುಡಿದು ಇದೀಗ ಪತ್ನಿ, ಮಕ್ಕಳು,ಕುಟುಂಬ, ಸ್ನೇಹಿತರು, ಊರು ಎಲ್ಲವನ್ನೂ ಬಿಟ್ಟು ಮತ್ತೆ ಹೊರ ಜಿಲ್ಲೆಯೂ ಅಲ್ಲ. ಹೊರ ದೇಶದತ್ತ ದುಡಿಯಲು ಏನೋ ಒಂದು ಕಳೆದುಕೊಳ್ಳುವಿಕೆಯ ಬೇಜಾರು. ಆದರೂ ಅನಿವಾರ್ಯತೆಯ ಮೇರೆಗೆ ಹೊರದೇಶದತ್ತ ಪ್ರಯಾಣಿಸಿಯೇ ಬಿಟ್ಟರು.

ಸೌದಿಗೆ ತಲುಪಿದ ಇವರು, ವೀಸಾ ಕಳಿಸಿದವರನ್ನು ಭೇಟಿಯಾಗಿ, ಹಲವು ದಿನಗಳ ಕಾಲ ಅವರ ರೂಮಲ್ಲಿ ತಂಗಿ, ವೀಸಾದಲ್ಲಿರುವ ಕೆಲಸಕ್ಕಾಗಿ ಸಂಬಂಧ ಪಟ್ಟವರನ್ನು ಸಂಪರ್ಕಿಸಲು ಮುಂದಾದರು. ಹಲವು ದಿನಗಳ ಕಾಲ ತಿರುಗಾಡಿ, ಪರದಾಡಿ ತುಂಬಾ ಸುಸ್ತುಗೊಳಗಾಗಿ ಹತಾಶೆಗೊಳುತ್ತಿದ್ದರು. ಎಷ್ಟೇ ಪರದಾಡಿದರೂ ಸಂಬಂಧ ಪಟ್ಟ ಅರಬ್ ಕಫಿಲ್ ಸಿಗುತ್ತಿಲ್ಲ. ಮನೆಗೆ, ಊರಿಗೆ ಕರೆ ಮಾಡಿದಾಗ ಅವರೊಂದಿಗೆ ನಾನು ಕ್ಷೇಮನಾಗಿದ್ದೇನೆ, ಕೆಲಸ ಒಂದೆರಡು ದಿನಗಳಲ್ಲಿ ಲಭ್ಯವಾಗುತ್ತದೆ ಆರಾಮದಲ್ಲಿದ್ದೇನೆ, ಆಹಾರವೆಲ್ಲ ಚೆನ್ನಾಗಿ ಸಿಗುತ್ತದೆ ಎಂದು ಹೇಳುತ್ತಿದ್ದರು. ಆದರೆ ನಿಜ ಬೇರೆಯೇ ಇತ್ತು.

ಇಬ್ಬರು ಸೂಟು ಬೂಟು ಹಾಕಿದವರು ಬಂದು, ‘ಶೀಘ್ರದಲ್ಲೇ ರೆಸ್ಟೋರೆಂಟ್ ನಲ್ಲಿ ಕೆಲಸ ಸಿಗುತ್ತದೆ, ಅದಕ್ಕೆ ಏನೋ ಚಾರ್ಜ್ ಹೇಳಿ ಅವರಿಂದ ಮತ್ತೆ 20,000 ರೂಪಾಯಿ ದುಡ್ಡು, ಪಾಸ್ ಪೋರ್ಟ್ ಪಡೆದುಕೊಂಡು ಹೋದರು. ಇವರು ಒಂದು ಕ್ಷಣಕ್ಕೆ ಮೂಕನಾಗಿ, ಉದ್ದೇಶವನ್ನು ನೆನೆದು ಎಲ್ಲವನ್ನೂ ಕೊಟ್ಟು ಬಿಟ್ಟರು.

ಕೆಲ ದಿನಗಳು ಕಳೆಯಿತು. ಮತ್ತೊಬ್ಬ ಬಂದು ನಿಮ್ಮ ಬಳಿ ಪಾಸ್ ಪೋರ್ಟ್ ಇದೆಯಾ? ಯಾವ ದೇಶದವರು ನೀವು? ಇಲ್ಲಿ ಯಾರೊಂದಿಗೆ ತಂಗುತ್ತಿದ್ದೀರಾ? ಎಂದು ಕೇಳಿದಾಗ ಇವರು ಏನೋ ಒಂದು ಪಾಸ್ ಪೋರ್ಟ್ ಕಾಪಿ ತೋರಿಸಿದರೂ ಅವನು ಒಪ್ಪದೆ ಇವರಿದ್ದ ರೂಮ್ ನಿಂದ ಇವರನ್ನು ತೆರಳಲು ಹೇಳುತ್ತಾನೆ. ಇವರು ವೀಸಾ ಕಳಿಸಿದ ಸ್ನೇಹಿತನಿಗೆ ಕರೆ ಮಾಡಿದರೂ ಸ್ವಿಚ್ ಆಫ್ ಬರುತ್ತಿದೆ. ಇವರು ಭಯಬೀತರಾಗಿ ಹೋದರು. ಆದರೂ ಒಂದು ಆತ್ಮವಿಶ್ವಾಸದಲ್ಲಿದ್ದರು. ಇವರು ಎಷ್ಟೇ ರಿಕ್ವೆಸ್ಟ್ ಮಾಡಿದರೂ ಅವರು ಏನೋ ತಮ್ಮ ಅಸ್ತಿತ್ವ ಅದು ಇದು ಎಂದು ಹೇಳುತ್ತಾ ಇವರನ್ನು ನಿರ್ಗಮಿಸಲು ಕೈಮುಗಿದರು. ಇವರು ರೂಮ್ ನಿಂದ ನಿರ್ಗಮಿಸಿಯೇ ಬಿಟ್ಟರು. ಅಲ್ಲಿನ ಒಂದು ದೊಡ್ಡ ಮಾಲ್ ನ ಓಣಿಯಲ್ಲಿ ಹಲವು ಅನಿವಾಸಿಗಳೊಂದಿಗೆ ತಂಗಲು ಮುಂದಾದರು.
ಸರಿಯಾದ ಆಹಾರವೂ ಇಲ್ಲ. ಇಚ್ಛಿಸಿ ಬಂದ ಕೆಲಸವೂ ಸಿಗುತ್ತಿಲ್ಲ. ಆದರೂ ಕರೆ ಮಾಡಿದರೆ ನಾನು ಆರಾಮವಾಗಿದ್ದೇನೆ. ಒಳ್ಳೆ ಫೆಸಿಲಿಟಿ ಇದೆ. ಕೆಲ ದಿನಗಳಲ್ಲಿ ಕೆಲಸಕ್ಕೆ ಜಾಯಿನ್ ಆಗುವೆ ಎಂದೇ ಹೇಳುತ್ತಿದ್ದರು.

ಇವರ ಜೀವನ ದಿಕ್ಕುಪಾಲಾಯಿತು. ಪರ ದೇಶದ ಪ್ರಯಾಣ ಮೊದಲ ಅನುಭವವಾಗಿದ್ದರಿಂದ ಇವರಿಗೆ ಏನೂ ತೋಚಲಿಲ್ಲ. ಇತ್ತ ಕೈಯಲ್ಲಿ ಪಾಸ್ಪೋರ್ಟ್ ಇಲ್ಲ. ದುಡ್ಡೂ ಇಲ್ಲ. ಕೆಲಸನೂ ಇಲ್ಲ. ಹೀಗೆ ಕೆಲ ದಿನಗಳು ಕಳೆದು ಅಲ್ಲಿ ರಿಜಿಸ್ಟರ್ ಮಾಡಿ ಪಾಸ್ ಪೋರ್ಟ್ ಗೆ ಕೊಟ್ಟ ಫೋನ್ ನಂಬರ್ ಗೆ ಒಂದು ಕರೆ ಬಂತು. ‘ವೀಸಾ ಆಗಿದೆ. ನೀವು ಎಲ್ಲಿದ್ದೀರಾ? ಎಂದು. ಇವರಿಗೆ ಎಲ್ಲಿಲ್ಲದ ಸಂತೋಷವಾಯಿತು. ರೆಸ್ಟೋರೆಂಟ್ ನಲ್ಲಿ ಕೆಲಸ ದೊರಕಿತಲ್ವಾ. ಇನ್ನು ಜೀವನ ಮುಂದುವರೆಸಬಹುದು ಎಂಬ ಆಶಾ ಭಾವನ ಮೂಡಿತು. ಹಾಗೆ ಅವರು ಬಂದು ಇವರನ್ನು ಭೇಟಿಯಾಗಿ ,ಮಾತನಾಡಿ ಇವರನ್ನು ಕಾರಲ್ಲಿ ಕರೆದುಕೊಂಡು ಹೋಗುತ್ತಾರೆ. ಹೋಗಿ ವೀಸಾ ಕೊಟ್ಟು, ‘ಇಲ್ಲಿ ನಿಮಗೆ ಕೆಲಸ. ಬೆಳಿಗ್ಗೆಯಿಂದ ರಾತ್ರಿವರೆಗೂ ಕೆಲಸ ಇರುತ್ತದೆ. ವಾರಕ್ಕೊಮ್ಮೆ ಪೇಟೆ ಕಡೆಗೆ ಹೋಗಬಹದು. ಆಹಾರವನ್ನು ನೀವೇ ಮಾಡಿಕೊಳ್ಳಬೇಕು. ನಿಮ್ಮೊಂದಿಗೆ ಒಬ್ಬ ಸುಡಾನ್ ನವ ಇದ್ದಾನೆ. ದೇಶದ 15000 ಸಂಬಳ’ ಎಂದು ಹೇಳಿ ಅವರನ್ನು ಬಿಟ್ಟು ಹೋಗುತ್ತಾರೆ.

ಇವರು ಕಂಗಾಲಾಗಿ ನಿಬ್ಬೆರಗಾಗಿ ಹೋಗುತ್ತಾರೆ. ಕಣ್ಣೀರಲ್ಲಿ ಮುಳುಗುತ್ತಾರೆ. ಯಾಕೆಂದರೆ ಅವರಿಗೆ ಒದಗಿಸಿದ ಮತ್ತು ಒರಿಜಿನಲ್ ವೀಸಾದಲ್ಲಿದ್ದ ಕೆಲಸ ಆಡುಗಳನ್ನು ಮೇಯಿಸುವಂಥದ್ದು. 40ಕ್ಕಿಂತ ಹೆಚ್ಚು ಆಡುಗಳನ್ನು ಮೇಯಿಸುವ ಮೂಲಕ ಜೀವನವನ್ನು ಮುಂದೆ ಸಾಗಿಸುವ ಸವಾಲು ಅವರ ಮುಂದೆಯಿತ್ತು.

ಒಂದು ಸೀಟ್ ಹಾಕಿದ ರೂಮನ್ನು ವಸತಿಗೆ ಕೊಡುತ್ತಾರೆ. ಅದರಲ್ಲಿ ಇಬ್ಬರು ತಂಗಬೇಕು. ಸರಿಯಾದ ಆಹಾರವಿಲ್ಲದೆ ಜೀವಿಸಬೇಕಾಗಿತ್ತು ಇವರು. ಅಲ್ಲಿಂದ ಬಿಡಕ್ಕೂ ಅಲ್ಲ. ಏನೂ ಮಾಡಕ್ಕೂ ಅಲ್ಲ. ಕೊನೆಗೆ ಒಂದು ನಿರ್ಧಾರ ಮಾಡುತ್ತಾರೆ ಅಲ್ಪ ಸಮಯದವರೆಗೆ ಇಲ್ಲಿ ದುಡಿಯುತ್ತೇನೆ ಎಂದು.

ಆದರೂ ಮನೆಯವರು ಕರೆ ಮಾಡಿದರೆ ನಾನು ಕ್ಷೇಮನಾಗಿದ್ದೇನೆ, ಒಳ್ಳೆಯ ಆಹಾರವಿದೆ,ರೆಸ್ಟೋರೆಂಟ್ ನಲ್ಲಿ ಕೆಲಸವೂ ದೊರಕಿದೆ. ಸಂಬಳ ಸ್ವಲ್ಪ ಕಮ್ಮಿ. ಮತ್ತೆ ಜಾಸ್ತಿಯಾಗುತ್ತೆ ಎಂದು ಹೇಳುತ್ತಿದ್ದರು. ತನ್ನ ಕಷ್ಟದ ನೋವನ್ನು ಮನೆಯವರಿಗೆ ತಿಳಿಸುವುದು ಬೇಡ ಎಂಬ ಯೋಚನೆಯಾಗಿತ್ತು ಅವರದ್ದು.
ಬೆಂದ ಬಿಸಿಲಲ್ಲಿ ಬಲು ಕಷ್ಟದಲ್ಲಿ ಆಡು ಮೇಯಿಸುತ್ತಾರೆ. ಅದೂ ಕೂಡ ಇವರ ಧಾಮ ಇರುವಂಥದ್ದು ಒಂದು ಹಳ್ಳಿಯ ಪರಿಸರದಲ್ಲಿ. ಹಲವು ತಿಂಗಳುಗಳು ಕಣ್ಣೀರಿನಲ್ಲೇ ದೂಡುತ್ತಾರೆ. ಆದರೂ ಏನೋ ಒಂದು ಆತ್ಮವಿಶ್ವಾಸದಲ್ಲಿರುತ್ತಾರೆ. ಮಾತ್ರವಲ್ಲ ನನಗೆ ಇದು ಅಸಾಧ್ಯವಾಗುತ್ತಿದೆ. ನನ್ನನ್ನು ದಯಮಾಡಿ ಊರಿಗೆ ಮರಳಿಸುವ ಎಂದು ಬೇಡುತ್ತಿದ್ದರು.

ಒಂದು ದಿನ ಅಚಾನಕಾಗಿ ಒಬ್ಬರು ಬಂದು ‘ತಗೋ ನಿನ್ ಪಾಸ್ ಪೋರ್ಟ್, ಟಿಕೆಟ್ ದುಡ್ಡನ್ನು ಕೊಟ್ಟು ತೆರಳಲು ಹೇಳುತ್ತಾರೆ. ಇವರ ಅದೃಷ್ಟವೋ, ಅವರ ಕನಿಕರವೋ ಏನೋ ಗೊತ್ತಿಲ್ಲ. ಕೊನೆಗೂ ಊರಿಗೆ ಹಿಂದಿರುಗಲು ಅವಕಾಶ ಒದಗಿತು. ಇವರು ತಲ್ಲೀನಗೊಳ್ಳುತ್ತಾರೆ ಮಾತ್ರವಲ್ಲ ಬೇಗನೇ ಊರಿಗೆ ಮರಳುತ್ತಾರೆ. ಕೊನೆಗೂ ಇವರು ಊರಿಗೆ ಮುಟ್ಟುತ್ತಾರೆ. ಅವರ ಕಷ್ಟ ನಷ್ಟ ನೋವನ್ನು ಊರಿಗೆ ಮರಳಿದ ನಂತರ ತನ್ನ ಪತ್ನಿಯ ಬಳಿ ಬಿಟ್ಟರೆ ಮತ್ಯಾರಲ್ಲೂ ಹಂಚಲಿಲ್ಲ.

ಜಾಹೀರಾತಿಗಾಗಿ ಸಂಪರ್ಕಿಸಿ : 8971596232

Leave a comment