ಜೀನಿಯಸ್

ಕಥೆ ಬರಹ – ಇಮ್ರಾನ್ ಪಾಂಡವರಕಲ್ಲು

ಆ ರಾತ್ರಿ ಊರವರೆಲ್ಲರೂ ಆತಂಕದಿಂದ ಕೂಡಿದ್ದು, ಏನೋ ಆಗಬಾರದು ಸಂಭವಿಸಿದೆ ಎಂಬ ಚಿಂತೆಯಲ್ಲಿದ್ದಾರೆ. ರಸ್ತೆಯ ಒಂದೊಂದು ಮೂಲೆಯಲ್ಲಿ ಒಂದೊಂದು ಗುಂಪು. ಪಿಸು ಪಿಸು ಚರ್ಚೆ. ಮಹಿಳೆಯರಲ್ಲೂ ಒಂದು ಬಿಗುವಿನ ವಾತಾವರಣ.

ವಿಚಾರ ಏನು ಎಂದರೆ ಊರಿನ ಒಂದು ಮನೆಯ ಹಂಚಿಗೆ ಕಳೆದ ಎರಡು ದಿವಸಗಳಿಂದ ರಾತ್ರಿ 7:30 ರಿಂದ 9 ರ ಒಳಗೆ ಎರಡು ಮೂರು ಬಾರಿ ಕಲ್ಲು ಎಸೆದ ಆರೋಪ. ಯಾಕೆ? ಏನು ? ಎತ್ತ? ಎಂದರಿಯದ ಊರವರು ಚಿಂತಾಮಗ್ನದಲ್ಲಿದ್ದಾರೆ. ಯಾಕೆ ಕಲ್ಲು ಎಸೆದಿರಬಹುದು? ನಿನ್ನೆಯೂ, ಮೊನ್ನೆಯೂ ,ಇಂದೂ ಎಸೆದಿದ್ದಾರೆ. ಯಾರು ಇರಬಹದು? ಯಾವ ಕಾರಣಕ್ಕಾಗಿ ? ಎಂಬ ಪ್ರಶ್ನೆಗಳು ಊರವರಲ್ಲಿ ಮೂಡುತ್ತಿತ್ತು.

ಆದರೂ ಉತ್ತರ ದೊರಕದೆ ಅಂದಿನ ದಿನ ಕಳೆಯಿತು. ಮಾರನೆಯ ದಿನವೂ ಕಲ್ಲೆಸೆತದ ಹಬ್ಬ. ಮತ್ತೆ ಅದೇ ರಾಗ. ಅದೇ ಹಾಡು. ಊರವರ ಆಕ್ರೋಶ ಇನ್ನೂ ಹೆಚ್ಚಿತು. ಕಲ್ಲು ಬೀಳುತ್ತಿರುವ ಮನೆಯವರಲ್ಲಿ ಯಾವ ದ್ವೇಷವೂ ಊರವರಿಗಿಲ್ಲ. ಮತ್ಯಾಕೆ ಆಗಿರಬಹುದು ? ಎಂಬ ಬಹು ಪ್ರಶ್ನೆಗಳು.

ಮಾರನೆಯ ದಿನ ಊರ ಯುವಕರು ಕಾದು ಕುಳಿತರು. ಕಲ್ಲು ಬೀಳುವ ಅದೇ ಸಮಯಗಳನ್ನು ನೋಡಿ ಕೂತರು. ಆದರೆ ದುರಾದೃಷ್ಟವಶಾತ್ ಅಂದು ಕಲ್ಲು ಬೀಳಲಿಲ್ಲ. ಕಾದು ಕುಳಿತವರೆಲ್ಲರೂ ನಿರಾಸೆಗೊಳಗಾದರು.

ಇನ್ನು ಕಲ್ಲು ಬೀಳಲಿಕ್ಕಿಲ್ಲ ಎಂದರಿತ ಊರವರು ಕಾಯಲು ಹಿಂದೆ ಸರಿದರು. ಆದರೆ ಮತ್ತೆ ಎರಡು ದಿನಗಳ ಬಳಿಕ ಕಲ್ಲೆತದ ಗದ್ದಲ. ಊರವರ ಆಕ್ರೋಶ ತಾರಕಕ್ಕೇರಿತು. ಯಾರು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿರುವುದು? ಎಂಬ ಪ್ರಶ್ನೆ ಮೂಡಲು ಶುರುವಾಯಿತು. ಊರವರೇ ಆಗಿರಬಹುದು ಎಂದು ಶಂಕಿಸಿ ಊರವರನ್ನೇ ಊರವರು ಸಂಶಯದಿಂದ ನೋಡಿದರು. ಒಬ್ಬ ಜುಗುಪ್ಸೆಯಿಂದ ಇದ್ದರೂ, ಅಥವಾ ನಗುಮುಖದಿಂದ ಇದ್ದರೂ, ಅಥವಾ ಆತಂಕದಿಂದ ಇದ್ದರೂ ಅವನ ಮೇಲೆ ಸಂಶಯಗಳು ಮೂಡುತ್ತಿದ್ದವು.

ಇನ್ನು ಕೆಲವರು ನಮಗೆಲ್ಲವೂ ಗೊತ್ತಿದೆ ಎಂಬುವ ಹಾಗೆ ಕೆಲವು ನಿರ್ದಿಷ್ಟರನ್ನು ಗುರಿಪಡಿಸಿ ಕೆಂಗಣ್ಣಿನಿಂದ ನೋಡುತ್ತಿರುವ ಬಗೆ ನೋಡಿದರೆ ನಿಜಕ್ಕೂ ಹಾಸ್ಯಾಸ್ಪದ.
ಇನ್ನು ಕೆಲವರು ಕೆಲ ಯುವಕರನ್ನು ಬಲವಾಗಿ ಸಂಶಯ ಪಟ್ಟರು. ಮಾತ್ರವಲ್ಲ ಊರವರೆಲ್ಲರಿಗೂ ಸಂಶಯ ಬರುವಂತೆ ಮಾಡಿದರು

ಒಂದು ದಿನ ಅದೇ ಮನೆಯ ಹಂಚಿಗೆ ಕಲ್ಲು ಬೀಳಿತು. ಆ ಕಲ್ಲು ಬಂದ ದಿಕ್ಕು, ಈಗಾಗಲೇ ಸಂಶಯಪಟ್ಟ ಯುವಕರು ದೈನಂದಿನ ಕೂರುವ ಕಟ್ಟೆಯ ಜಾಗ ಮತ್ತು ಅದರಲ್ಲಿದ್ದ ಒಬ್ಬ ಯುವಕನ ಮನೆಯ ತಾಣದ ಕಡೆಯಿಂದ ಬಂತೆಂದು ಬಲವಾಗಿ ನಂಬಿ, ಅವರೇ ಬಿಸಾಡಿದ್ದು ಎಂದು ದೃಢಪಟ್ಟು ಸೋ ಕಾಲ್ಡ್ ಊರ ಪ್ರಗತಿಪರರು ಮತ್ತು ಊರವರು ಆ ಯುವಕನ ಮನೆಗೆ ಧಾವಿಸಿ ,ಮನೆಯ ಪಕ್ಕದಲ್ಲಿದ್ದ ಬರೆಯನ್ನು ಗಮನಿಸಿ, ಈ ಬರೆಯಿಂದಲೇ ಕಲ್ಲು ಬಿಸಾಕಿದ್ದು ಎಂದು ಶಂಕಿಸಿ, ಕೈಯಲ್ಲಿ ಒಂದು ಕಲ್ಲು ಹಿಡಿದು ಇದೇ ಕಲ್ಲನ್ನು ನೀನು ಬಿಸಾಕಿದ್ದು ಎಂದು ಸಂಶಯಿಸಿ ನೀನೇ ಎಂದು ಅಲ್ಲಿದ್ದ ಒಬ್ಬ ಯುವಕನಿಗೆ ಬೆರಳು ತೋರಿಸಿದರು.

ಅಲ್ಲಿ ಗದ್ದಲ ಉಂಟಾಯಿತು. ನಾನಲ್ಲ ಎಂದು ಇವರ ಆರೋಪವನ್ನು ಆ ಯುವಕ ಅಲ್ಲಗಳೆದನು. ಊರವರೆಲ್ಲರೂ ಗದ್ದಲ ಹೆಚ್ಚಿಸಿದರು. ಅಂತೂ ಇಂತೂ ಆ ದಿನ ಕಳೆದು ಇನ್ನೊಂದು ದಿನ ಪೊಲೀಸರ ತಂಡವೇ ಧಾವಿಸಿತು. ಯಾರು ಈ ಕಲ್ಲು ಬಿಸಾಕುವುದು? ಇಲ್ಲಿಂದ ಅಲ್ಲಿಗೆ ಕಲ್ಲು ಹೋಗಬಹುದೇ ಎಂದು ಅಸಲ ಮಸಲ ತರ ಪೊಲೀಸರು ಜವಾಬು ನೀಡುತ್ತಿದ್ದರು. ಆವಾಗಲೇ ಎಲ್ಲರಿಗೂ ಗೊತ್ತಾಯಿತು ಪೊಲೀಸರು ಎರಡು ಬಾಟ್ಲಿ ಎಣ್ಣೆ ಹಾಕ್ಕೊಂಡೆ ಬಂದಿದ್ದಾರೆಂದು.

ಶಂಕಿತ ಯುವಕನ ಮನೆಗೆ ಪೊಲೀಸರು ಹೋಗಿ, ವಿಚಾರಿಸಿದರು. ಸ್ಟೇಶನ್ ಗೆ ಬರುವಂತೆ ಹೇಳಿದರು.
ಪೊಲೀಸರು ಬಂದಾಗ ಚಿಕ್ಕ ಮಕ್ಕಳಿಂದ ಹಿಡಿದು, ಯುವಕರು, ಮಹಿಳೆಯರು, ಮುದಿಯರು ಎಲ್ಲರೂ ‘ ಶೆ ಯಾರಾಗಿರಬಹುದು? ಈ ರೀತಿಯಲ್ಲಿ ಆಟವಾಡಿಸುವುದು? ಪೊಲೀಸರು ಬರುವಹಾಗೆ ಆಯಿತಲ್ಲವೇ ? ಎಂದೆಲ್ಲಾ ಆತಂಕ ವ್ಯಕ್ತಪಡಿಸಿದರು.

ಆ ನಂತರ ನಿರಂತರ ಹಲವು ದಿನ ಊರವರು ಕಾದು ಕುಳಿತರು. ಯಾರೆಂದು ಸಾಕ್ಷಿ ಸಮೇತ ಕಂಡು ಹಿಡಿಯಲು ಸಾಧ್ಯವಾಗಲಿಲ್ಲ. ಪ್ರತ್ಯಕ್ಷವಾಗಿ ನೋಡಿ ಕಂಡು ಹಿಡಿಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಕಾದು ಕುಳಿತ ಕೆಲವು ದಿನ ಕಲ್ಲು ಬಿದ್ದರೂ ಕಂಡು ಹಿಡಿಯಲಾಗಲಿಲ್ಲ. ಒಂದೊಂದು ದಿನ ಕಾದು ಕುಳಿತ ದಿನ ಕಲ್ಲೇ ಬೀಳುತ್ತಿರಲಿಲ್ಲ. ಕೆಲವೊಂದು ದಿನ ಕಾಯದೇ ಇದ್ದ ದಿನಗಳಲ್ಲಿ ಕಲ್ಲು ಬೀಳುತ್ತಿತ್ತು.

ಕೆಲವರಿಗಂತೂ ದೆವ್ವ, ಪಿಶಾಚಿಯೆಂದೂ ಆತಂಕವಾಯಿತು. ಕೆಲವರು ಹರಕೆ ಇಡಲು ಮುಂದಾದರು. ಕೆಲವರು ಇಂತಹ ಜೀನಿಯಸ್ ಯಾರಪ್ಪ ಎಂದು ಕುತೂಹಲದಿಂದ ಕೂಡಿದ್ದರು.

ಕೆಲವು ದಿನಗಳುರುಳಿತು. ತತ್ ಕ್ಷಣ ಒಂದು ದಿನ ಸುದ್ದಿಯಾಯಿತು? ಕಲ್ಲು ಬಿಸಾಕಿದವ ಸಿಕ್ಕಿ ಬಿದ್ದ, ಸಿಕ್ಕಿ ಬಿದ್ದ ಎಂದು. ಯಾರೆಂದು ಹೇಳುತ್ತಿಲ್ಲ. ಎಲ್ಲರೂ ಕುತೂಹಲದಿಂದ ಮನೆಯ ಪಕ್ಕ ಬಂದರು. ನೋಡುವಾಗ ಆ ಜೀನಿಯಸ್ ನನ್ನು ನೋಡಿ ಎಲ್ಲರೂ ನಿಬ್ಬೆರಗಾದರು.

ಕಲ್ಲು ಬಿಸಾಕಿದವ ದೆವ್ವ,ಪಿಶಾಚಿ ಅಥವಾ ಆ ಶಂಕಿತ ಯುವಕನೇನಲ್ಲ. ಕಲ್ಲು ಬಿಸಾಕಿದ ಕಲ್ಲು ಬೀಳುತ್ತಿದ್ದ ಮನೆಯ ಪಕ್ಕದ ಮನೆಯಲ್ಲಿದ್ದ ಒಬ್ಬ 10 ವಯಸ್ಸಿನ ಒಳಗಿನ ಒಬ್ಬ ಪುಟ್ಟ ಬಾಲಕ.

ನಿಜಕ್ಕೂ ಆಶ್ಚರ್ಯವಾಗುತ್ತಿದಿಯಾ? ಹೌದು ಎಲ್ಲರಿಗೂ ಆಶ್ಚರ್ಯ ಚಕಿತರಾಗಿದ್ದರು. ಉಳಿದವರನ್ನು ಶಂಕಿಸಿದ್ದು ಸುಖಾ ಸುಮ್ಮನೆ. ಆ ಯುವಕನ ಮನೆಗೆ ಧಾವಿಸಿದ್ದು ವೆಸ್ಟ್. ಆ ಯುವಕನನ್ನು ಆರೋಪಿಸಿದ್ದು ವೇಸ್ಟ್. ಎಂದೆಲ್ಲಾ ಅರಿತು ಊರವರು ತಮ್ಮ ಸಾಧನೆಗಳನ್ನು ನೆನೆದು ಮನದೊಳಗೆಯೇ ನಕ್ಕರು.

ಈ ಪುಟ್ಟ ಬಾಲಕ ಕಲ್ಲೆಸೆಯುವುದನ್ನು ಕಲ್ಲು ಬೀಳುತ್ತಿರುವ ಮನೆಯ ಯಜಮಾನ ಒಂದು ಕಡೆಯಲ್ಲಿ ನೀರವತೆಯಿಂದ,ದಿನವನ್ನೂ ಯಾರಿಗೂ ಹೇಳದೆ ಅಡಗಿ ಕೂತು ಕಾಯುತ್ತಿದ್ದರು. ಆ ಸಂದರ್ಭದಲ್ಲಿ ಈ ಬಾಲಕ ತನ್ನ ಮನೆಯಿಂದ ಮೆಲ್ಲನೆ ಹೊರಬಂದು ಕೈಯಿಂದ ಕಲ್ಲು ಹೆಕ್ಕಿ ಕೊಂಡು ಬಿಸಾಕುವುದನನ್ನು ಪ್ರತ್ಯಕ್ಷವಾಗಿ ನೋಡಿ ನಿಬ್ಬೆರಗಾದರು.

ಊರವರೆಲ್ಲರೂ ಸೇರಿ ಆ ಬಾಲಕನಿಗೆ ಸಿಕ್ಕಾಪಟ್ಟೆ ಬಯ್ದರು. ಆತನ ಪೋಷಕರಿಗೂ ಬಯ್ದರು. ಬಾಲಕನಾದ್ದರಿಂದ ಹರಕೆಯನ್ನೆಲ್ಲಾ ಹಿಂದೆ ತೆಗೆಯಲು ಮುಂದಾದರು. ಅಲ್ಲಲ್ಲಿ ಗುಸು ಗುಸು ಚರ್ಚೆ. ಆತನ ಪೋಷಕರು ಅರಿಯದೇ ಈತ ಬಿಸಾಕುತ್ತಿದ್ದ. ಅಂದು ಪೊಲೀಸರು ಬಂದ ದಿನ ‘ ಯಾರಪ್ಪಾ ಬಿಸಾಕಿದ್ದೂ’ ಎಂದವರಲ್ಲಿ ಈತನೂ ಒಬ್ಬ.

ಅಷ್ಟಕ್ಕೂ ಈತ ಬಿಸಾಕಲು ಕಾರಣವೇನು ಗೊತ್ತಾ? ಈತನಂತೆ ಎರಡು ಸಣ್ಣ ಬಾಲಕರು ಕಲ್ಲು ಬಿದ್ದ ಮನೆಯಲ್ಲಿದ್ದರು. ಈ ಪುಟ್ಟ ಬಾಲಕ ಆ ಮನೆಗೆ ಕ್ಯಾರಮೋ ಅಥವಾ ಲೂಡನೋ ಆಟವಾಡಲು ಹೋದಾಗ ಆ ಮನೆಯವರು ಏನೋ ಕಾರಣದಿಂದ ಆತನಿಗೆ ಆಟವಾಡಲು ಅವಕಾಶ ನೀಡುತ್ತಿರಲಿಲ್ಲ. ಕಾರಣ ಸಮಂಜಸವಾಗಿರಬಹುದು ಅಥವಾ ಅಸಮಂಜಸವಾಗಿರಲೂಬಹುದು. ಒಂದೆರಡು ದಿನ ಈತನಿಗೆ ಅವಕಾಶ ಕೊಟ್ಟರೂ ನಿರಂತರವಾಗಿ ಈತನಿಗೆ ಆ ಮನೆಯ ಪೋಷಕರು ಅವಕಾಶ ನೀಡುತ್ತಿರಲಿಲ್ಲ. ಈ ಬಾಲಕನ ಮನೆಯಲ್ಲಿಯೂ ಅಂತಹ ಆಟದ ಸಾಮಾನಿಲ್ಲ. ಈತನೂ ಬಡಕುಟುಂಬದಲ್ಲಿ ಜೀವಿಸುತ್ತಿದ್ದ. ಈತನಿಗೆ ಅವಕಾಶ ನಿರಾಕರಸಿದ ಕಾರಣ ಅದರ ಪ್ರತೀಕಾರವಾಗಿ ಯಾರಿಗೂ ಶಂಕೆ ಬರದ ರೀತಿಯಲ್ಲಿ ಜೀನಿಯಸ್ ತರ ಕಲ್ಲು ಬಿಸಾಕುತ್ತಿದ್ದ.
ಬೇರೆಯವರನ್ನು ಶಂಕಿಸುವಾಗ ಊರವರ ಗುಂಪಿನ ಮಧ್ಯೆಯಲ್ಲೂ ಇದ್ದ.

ಆದರೆ ಇದರ ಸಾರಾಂಶವೇನೆಂದರೆ ಈ ಮಗುವಿಗೆ ಅವಕಾಶ ನಿರಾಕರಿಸಿದ್ದರಿಂದ ಮಾನಸಿಕವಾಗಿ ಕುಗ್ಗಿ, ಜಿಗುಪ್ಸೆಗೊಳಗಾಗಿ ಸೇಡುತನದ ಮನೋಭಾವದಿಂದ ಕೂಡಿದ್ದು, ಪ್ರತೀಕಾರವಾಗಿ ಮನೆಗೆ ಕಲ್ಲು ಬಿಸಾಕುತ್ತಿದ್ದ.

ಇದು ನಿಜಕ್ಕೂ ನಾವು ಗಂಭೀರವಾಗಿ ಆಲೋಚಿಸುವಂಥದ್ದು. ಈ ಜಾಗೃತಿಯನ್ನು ನಮ್ಮ ಮನೆಯ ಮಕ್ಕಳಲ್ಲಾದರೂ, ಅಕ್ಕ ಪಕ್ಕದ ಮನೆಯಲ್ಲಾದರೂ ವಹಿಸಲೇ ಬೇಕು. ಮಕ್ಕಳ ಆಸಕ್ತಿಯನ್ನು ,ಮನೋಸ್ಥಿತಿಯನ್ನು ಅರಿಯಬೇಕು.

Leave a comment