ಮದರ್ ಡೈರಿ

Advertisement

ಮನುಜನ ಜೀವನದ ಪಯಣದಲ್ಲಿ ಹಲವು ಸ್ವಾರಸ್ಯಕರ ಘಟನೆಗಳು ಸಂಭವಿಸಿ ಹೋಗುತ್ತದೆ. ಕೆಲವೊಂದು ಸಲ ಆ ಘಟನೆಗಳು ಮನದ ಅಂತರಾಳವನ್ನು ಸ್ಪರ್ಶಿಸಿ ವಾಸ್ತವತೆಯನ್ನು ಅರಿವು ಮಾಡಿಸಿ ಕೊಡುತ್ತದೆ. ಅಂತಹ ಒಂದು ನೈಜ ಘಟನೆಯನ್ನುಈ ಬಾರಿಯ ಕಹಾನಿಯಲ್ಲಿ ಬೆಳಕು ಚೆಲ್ಲಲು ಬಯಸುತ್ತಿದ್ದೇನೆ.

ನಾನು ನನ್ನ ವ್ಯವಹಾರದ ನಿಮಿತ್ತ ಒಂದು ಊರಿಗೆ ಭೇಟಿ ನೀಡಿದ್ದೆ. ಅಲ್ಲಿನ ಒಬ್ಬ ನಿವಾಸಿಯ ಬಳಿ ಕಿಚನ್ ಮತ್ತು ಮನೆ ಸಾಮಾಗ್ರಿಗಳ ವ್ಯವಹಾರ ನಡೆಸುತ್ತಿದ್ದೆ. ಹೀಗೇ ಮಾತನಾಡುತ್ತಿರಬೇಕಾದರೆ , ಮನೆಯ ಹೊರವಲಯದಿಂದ ಬಿಳಿ ವಸ್ತ್ರಧಾರಿಣಿ ವೃದ್ಧೆಯೊಬ್ಬರು ನೇರ ನಾನು ವ್ಯವಹಾರ ನಡೆಸುತ್ತಿದ್ದ ಮನೆಯ ಪಕ್ಕ ಬರುತ್ತಿದ್ದರು. ನಾ ಭಾವಿಸಿದೆ ಈ ಮನೆಯವರೇ ಆಗಿರಬಹುದು ಎಂದು . ಆದರೆ ನನ್ನ ಊಹೆ ತಪ್ಪಾಗಿತ್ತು. ಅವರು ಪಕ್ಕದ ಮನೆಯವರಾಗಿದ್ದರು ಎಂದು ಅಲ್ಪ ಸಮಯದ ಬಳಿಕ ತಿಳಿಯಿತು.

Advertisement
Advertisement
Advertisement

ನಾನು ಆ ಮನೆಯವರೊಂದಿಗೆ ಸಮಾಲೋಚಿಸುತ್ತಿರಬೇಕಾದರೆ, ಇದ್ದಕ್ಕಿದ್ದಂತೆ ಆ ವೃದ್ಧೆ ಏನಿದು ? ಯಾವ ಸಾಮಾಗ್ರಿ ಇದು ? ಎಷ್ಟಿದಕ್ಕೆ? ಎಂದು ಸಾವಧಾನವಾಗಿಯೇ ಅಲ್ಪ ಜೋರಾದ ಶಬ್ದಗಳಿಂದ ನನ್ನ ಬಳಿ ಕೇಳಿದರು. ನಾ ಹೀಗೆನೇ ಸಾಮಾಗ್ರಿಗಳ ಪರಿಚಯ ಮಾಡಿದೆ. ಆದರೆ ಅವರ ಮುಖದಲ್ಲಿ ಏನೋ ಒಂದು ನಿರುತ್ಸಾಹ ಕಾಣುತ್ತಿತ್ತು. ಮನೆಯವರು ಸಾಮಾಗ್ರಿಗಳ ಬಗ್ಗೆ ಸಕರಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಈ ವೃದ್ಧೆ ಅಚ್ಚರಿಯಂತೆ ವರ್ತಿಸುತ್ತಿದ್ದರು. ಸಾಮಾನ್ಯವಾಗಿ ಹಳ್ಳಿ ಜನರು ಗೊತ್ತುಗುರಿಯಿಲ್ಲದೆ ನಕರಾತ್ಮಕ ಅನಿಸಿಕೆಗಳನ್ನು ಹೇಳುವುದು , ಅಚ್ಚರಿ ಪಡುವುದು ಸಹಜ ಎಂದರಿತ ನಾನು ತಾಳ್ಮೆಯಿಂದ ಎಲ್ಲವನ್ನೂ ಗಮನಿಸುತ್ತಿದ್ದೆ.

ಹೀಗೆ ಮಾತನಾಡಿ ಉತ್ತಮ ವ್ಯವಹಾರವನ್ನು ಆ ಮನೆಯವರು ಮಾಡಿದರು. ಇದನ್ನೆಲ್ಲಾ ಗಮನಿಸುತ್ತಾ ನಿರುತ್ಸಾಹಿಯಂತೆ ವರ್ತಸುತ್ತಿರುವ ಆ ವೃದ್ಧೆ, ವ್ಯವಹಾರದ ಬಗ್ಗೆ ಇನ್ನೇನು ಈ ಮನೆಯವರೊಂದಿಗೆ ನಕರಾತ್ಮಕ ಆಲೋಚನೆಯನ್ನು ತುರುಕಿಸುತ್ತಾಳೋ ಎಂದು ಆತಂಕದಲ್ಲಿದ್ದೆ. ತಂಪು ಪಾನೀಯವನ್ನು ಕುಡಿದು ಅಲ್ಲಿಂದ ನಿರ್ಗಮಿಸುವ ವೇಳೆಗೆ ಆ ಮಹಿಳೆ ಬಹಳ ಕುತೂಹಲದಿಂದ ‘ಇನ್ನೊಂದು ಸಲ ಬರುವಾಗ ನನಗೆ ಸಣ್ಣ ಅಡುಗೆ ಪಾತ್ರೆಯೊಂದು ಬೇಕು , ತಗೊಂಡು ಬಾ , ಆಯಿತಾ ‘ ಎಂದು ನನ್ನ ಬಳಿ ಹೇಳಿದಳು. ಸಣ್ಣ ಪಾತ್ರೆಗಳು ನಮ್ಮ ವ್ಯವಹಾರದ ಹೆಚ್ಚಿನ ಆದ್ಯತೆಗಳಾಗದಿದ್ದರೂ, ನಾನು ಸರಿಯೆಂದು ಒಪ್ಪಿ ಅಲ್ಲಿಂದ ನಿರ್ಗಮಿಸಿದೆನು.

ಹಲವು ತಿಂಗಳುಗಳ ಬಳಿಕ ಆ ಊರನ್ನು ಹಾದು ಹೋಗುವಾಗ ನನಗೆ ಆ ವೃದ್ಧೆಯ ಮತ್ತು ನನ್ನೊಂದಿಗೆ ವ್ಯವಹಾರ ಮಾಡಿದ ಮನೆ ನೆನಪಾಯಿತು. ನನ್ನ ಬಳಿ ಸಾಮಾಗ್ರಿಗಳೂ ಇದ್ದವು. ಹೀಗೆ ನನ್ನೊಂದಿಗೆ ವ್ಯವಹಾರ ಮಾಡಿದ ಮನೆಗೆ ಹೋದೆ . ಅವರು ನನ್ನ ಗುರುತನ್ನು ಹಚ್ಚಿ, ವಿವಿಧ ವಿನ್ಯಾಸದ ಸಾಮಾಗ್ರಿಗಳನ್ನು ಮತ್ತೆ ಖರೀದಿಸಿದರು. ಈ ಬಾರಿ ಕಳೆದ ಬಾರಿಗಿಂತ ಹೆಚ್ಚಗೆ ವ್ಯವಹಾರ ಮಾಡಿದರು. ಆ ಸಂದರ್ಭದಲ್ಲಿ ನನಗೆ ಆ ಬಿಳಿ ವಸ್ತ್ರಧಾರಣೆಯ ವೃದ್ಧೆಯ ನೆನಪಾಯಿತು. ನೆನಪಾದದ್ದೇ ಕ್ಷಣ ಆ ಕಡೆಯಿಂದ ಆ ವೃದ್ಧೆಯ ಆಗಮನವಾಗುತ್ತಿದೆ. ಅವರನ್ನು ನೋಡಿದ ತಕ್ಷಣ ನನಗೆ ಅವರು ಹೇಳಿದ್ದ ಸಣ್ಣ ಸಾಮಾಗ್ರಿಯ ನೆನಪಾಯಿತು ಮಾತ್ರವಲ್ಲ ಅದು ಇದೆಯೇ ಎಂಬುವುದರ ಖಚಿತತೆಯನ್ನೂ ಮಾಡಿದೆ.

ನನ್ನ ಬಳಿ ಬಂದು ಪರಿಚಯ ಮಾಡಿ, ಮನೆಯವರೊಂದಿಗೆ ಮತ್ತೆ ವಟವಟ ಎಂದು ಗುಸುಗುಟ್ಟಲು ಶುರು ಮಾಡಿದರು. ನನಗೆ ಆ ವೃದ್ಧೆಯ ಮೇಲೆ ಮತ್ತೆ ಏನೋ ಒಂದು ಸಂಕುಚಿತ ಮನೋಭಾವ ಹುಟ್ಟಿತು. ಆದರೂ ಪರವಾಗಿಲ್ಲ ಬಂದ ಕೆಲಸ ಮಾಡುವ ಎಂದು ‘ನಿಮಗೆ ಸಣ್ಣ ಸಾಮಾಗ್ರಿ ತಂದಿದ್ದೇನೆ, ಬೇಕಾ ?’ ಎಂದು ಕೇಳಿದೆ. ಸ್ವಲ್ಪ ನಿರಾಸಕ್ತಿಯಾದರೂ ಆಯಿತು ಮನೆಗೆ ಹೋಗುವ ಎಂದು ಕರೆದರು. ಅವರ ಬಗ್ಗೆ ಏನೋ ಒಂದು ತಪ್ಪು ನಿರಾಶದಾಯಕ ಕಲ್ಪನೆ ಮೂಡಿತು. ನನಗೆ ಅವರ ಮನೆಗೆ ಹೋಗಲು ಮನಸಿರಲಿಲ್ಲ. ಆದರೂ ಒಲ್ಲದ ಮನಸ್ಸಿನಿಂದ ಹೋಗಲು ಒಪ್ಪಿದೆ. ಮೆಲ್ಲನೆ ಈ ಮನೆಯವರೊಂದಿಗೆ ಅವರ ಸಹವಾಸಕ್ಕೆ ಹೋದರೆ ವ್ಯವಹಾರ ಆದಹಾಗೆನೇ ಎಂದು ಗೊಣಗುತ್ತಾ ಹೋದೆ.

ಮನೆಯತ್ತ ನಡೆಯುತ್ತಿರಬೇಕಾದರೆ, ಮನದಲ್ಲಿ ಏನೋ ಒಂದು ಸಂಚಲನ ಹುಟ್ಟಿತು. ಮನೆಯ ಒಳಗಿಂದ ಆ ವೃದ್ಧೆ ಬರುತ್ತಿದ್ದರು. ಇದ್ದಕ್ಕಿದ್ದಂತೆ ಅವರು ಪ್ರೀತಿಯಿಂದ ಮಾತನಾಡಲು ಶುರು ಮಾಡಿದರು. ಆ ವೃದ್ಧೆಗೆ ಸುಮಾರು 50 – 55 ವಯಸ್ಸಾಗಿರಬಹುದು. ಅವರು ಮೂಲತಃ ಕೇರಳದ ಹಿಂದೂ ಕುಟುಂಬಕ್ಕೆ ಸೇರಿದವರು. ನಾನು ಏನನ್ನು ಆಲೋಚಿಸದೇ ತಂದ ಸಾಮಾಗ್ರಿಯನ್ನು ಅವರಿಗೆ ಕೊಟ್ಟು ಹೋಗುವ ಎಂದು ನನ್ನ ಗಾಡಿಯ ಕಡೆ ತೆರಳುವಾಗ ಆ ವೃದ್ಧೆ ನನ್ನನ್ನು ನೋಡಿ ಇದ್ದಕ್ಕಿದ್ದಂತ ಅಳಲು ಆರಂಭಿಸಿದರು. ನನಗೆ ಅಚ್ಚರಿಯಾಯಿತು. ನನಗೆ ಏನೂಂತ ಗೊತ್ತಾಗಲಿಲ್ಲ.

ನಂತರ ನಾನು ಅವರ ಬಳಿ ಏನು ವಿಚಾರ ಎಂದು ಕೇಳಿದಾಗ ‘ ನನಗೆ ನಿನ್ನನ್ನು ನೋಡುವಾಗ ನನ್ನ ಎರಡು ಮಕ್ಕಳ ನೆನಪಾಯಿತು’ ಎಂದರು. ನನಗೆ ಏನೋ ಒಂದು ಕುತೂಹಲ ಮೂಡಿತು. ಅವರ ಬಳಿ ಅಲ್ಪ ಸಮಯ ಕಳೆಯಲು ಮುಂದಾದೆ. ನಿಮ್ಮ ಮನೆಯಲ್ಲಿ ಯಾರೆಲ್ಲಾ ಇದ್ದಾರೆ ? ಎಂದು ಕೇಳಿದೆ . ನಾನು ಈ ಒಂದು ಪ್ರಶ್ನೆಯನ್ನು ಕೇಳಿದ ನಂತರ ಅವರ ವ್ಯಥೆಯ ಕಥೆಯನ್ನು ಹೇಳಲಾರಂಭಿಸಿದರು.

‘ನಾನು ಮನೆಯಲ್ಲಿ ಒಬ್ಬಳೇ ವಾಸಿಸುತ್ತಿದ್ದೇನೆ. ನನ್ನ ಗಂಡ ತೀರಿ ಹೋಗಿದ್ದಾರೆ. ನನಗೆ ಎರಡು ಮಕ್ಕಳಿದ್ದಾರೆ.ಒಬ್ಬಳು ಹೆಣ್ಣು ಮಗಳು ಮತ್ತು ಇನ್ನೊಬ್ಬ ಗಂಡು ಮಗ. ಅವರಿಬ್ಬರೂ ಮದುವೆಯಾಗಿ ದೂರ ದೂರದ ಊರಿನಲ್ಲಿದ್ದಾರೆ. ಎಲ್ಲಿದ್ಧಾರೆ ಎಂಬುವುದು ಸರಿಯಾಗಿ ಗೊತ್ತಿಲ್ಲ. ಆದರೆ ನಾನೆಲ್ಲಿದ್ದೇನೆ ಎಂಬುವುದು ಅವರಿಗೆ ಗೊತ್ತಿದೆ. ಹಲವಾರು ವರ್ಷಗಳಾಯಿತು. ತಮ್ಮನ್ನು ಹೆತ್ತ ತಾಯಿ ಸತ್ತಿದ್ದಾಳೆಯೋ ಬದುಕಿದ್ದಾಳೆಯೋ ಎಂಬುವುದನ್ನು ಕೂಡ ನನ್ನ ಎರಡು ಮಕ್ಕಳು ಅರಿಯುತ್ತಿಲ್ಲ. ಅವರನ್ನು ಹೆತ್ತು , ಸಾಕಿ ಸಲಹಲು ನಾನು ಪಡಬಾರದ ಕಷ್ಟಗಳನ್ನು ಪಟ್ಟಿದ್ದೇನೆ. ಅವರ ಮದುವೆಗೆ ಇದ್ದ ಸ್ವಲ್ಪ ಬಂಗಾರಗಳನ್ನು, ಜಾಗಗಳನ್ನೂ ಮಾರಿ ಕಷ್ಟಪಟ್ಟಿದ್ದೆ. ಒಂದೇ ಒಂದು ದಿವಸ ನನ್ನನ್ನು ನೋಡಲು ಅವರು ಬರಲಿಲ್ಲ. ಈಗ ನನಗೆ ಯಾರೂ ಆಶ್ರಯದಾತರಿಲ್ಲ. ಮೇಲಿನ ಮನೆಯವರು ಒಂದು ವೇಳೆ ಇಲ್ಲದಿದ್ದರೆ ನನ್ನ ಬದುಕು ಅಧೋಗತಿಗೆ ಸಾಗುತ್ತಿತ್ತು. ನಾನು ಯಾರ್ಯಾರ ಬಳಿ ಭಿಕ್ಷೆ ಬೇಡಿ ಜೀವನವನ್ನು ಸಾಗಿಸುತ್ತಿದ್ದೇನೆ. ನನಗೆ ಆರೋಗ್ಯವೂ ಸರಿಯಿಲ್ಲ. ಹಲವು ವರ್ಷಗಳ ಹಿಂದೆ ನನ್ನ ಮೊಣಕಾಲು ಬಲಹೀನತೆಗೊಂಡು ಶಸ್ರ್ತಚಿಕಿತ್ಸೆಯಾಗಿತ್ತು. ಈಗ ಹೆಚ್ಚಾಗಿ ನಡೆಯಲೂ ಆಗುತ್ತಿಲ್ಲ. ನಿನ್ನ ಮುಖವನ್ನು ನೋಡಿದಾಗ, ನೀನು ಮಾತನಾಡುವಾಗ ನನ್ನ ಮಗನ ನೆನಪಾಯಿತು’ ಎಂದು ನನ್ನ ಬಳಿ ಗೋಗರೆದರು.

ನನ್ನ ಮನವು ಸಂಪೂರ್ಣವಾಗಿ ವಾಸ್ತವದ ಮಗ್ನತೆಗೆ ಸಾಗಿತು. ಅವರು ಮಕ್ಕಳ ಅಕ್ಕರೆಯಿಲ್ಲದೆ, ಆಶ್ರಯವಿಲ್ಲದೆ ಜಂಜಾಟದಲ್ಲಿ ಜೀವನವನ್ನು ಸಾಗಿಸುವ ನೋವು ನನಗೆ ಮನದಟ್ಟಿತು. ಅವರು ಸಣ್ಣ ಪಾತ್ರೆ ಎಂದಾಗಲೇ ನನಗೆ ಅರ್ಥವಾಗಬೇಕಿತ್ತು ಇವರು ಒಬ್ಬಂಟಿಯಾಗಿದ್ದಾರೆಂದು. ಅವರು ‘ ನಿಮ್ಮವರು ಉಪವಾಸದ ಲೆಕ್ಕದಿಂದ ಹಲವರಿಗೆ ಆಹಾರ ಕಿಟ್ ಗಳನ್ನು ಕೊಡುತ್ತಿದ್ದಾರಂತೆ. ನನಗೆ ಒಂದು ಕೊಡಬಹುದಾ ?’ ಎಂದು ನನ್ನ ಬಳಿ ಕೇಳಿದಾಗ ನನ್ನ ಮನ ಕರಗಿತು. ಅವರಿಗೆ ದೊರಕಿಸಿ ಕೊಡುವ ವಿಶ್ವಾಸವನ್ನೂ ನೀಡಿದೆ. ಅವರು ನಾನು ನಿರ್ಗಮಿಸುವಾಗ ನನ್ನ ಹೆಸರು ಹೇಳಿ ‘ಮಗನೇ ಜಾಗೃತೆಯಿಂದ ಹೋಗು; ಎಂದು ಹೇಳಿ ಕಳಿಸಿಕೊಟ್ಟರು. ಎಷ್ಟು ಸಮಾಧಾನ ಪಡಿಸಿದರೂ ಅವರ ಅಳುವನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಹೋಗಿದ್ದು ಯಾತಕ್ಕೋ , ಆದದ್ದು ಏನೋ…

ಮೊದಲು ನಾನು ಅವರನ್ನು ಕೆಟ್ಟದಾಗಿ ಆಲೋಚಿಸಿ, ಅವರ ಬಗ್ಗೆ ಒಂದೇ ಕ್ಷಣಕ್ಕೆ ತೀರ್ಮಾನ ಮಾಡಿದ್ದೆ. ಆದರೆ ಅವರ ಜೀವನದಲ್ಲೊಂದು ಇಂತಹ ದುರುಳತೆಯ ಘಟನೆ ನಡೆದಿದೆ , ಅವರ ಸಂತೋಷದ ಸಂಕೇತಗಳನ್ನೇ ಕಳೆದು ಕೊಂಡಿದ್ದಾರೆ ಎನ್ನುವುದು ಆ ಮೇಲೆ ತಿಳಿಯಿತು.

ತಂದೆ ತಾಯಿಯನ್ನು ಮರೆತು ಜೀವನವನ್ನು ಎಂಜಾಯ್ ಮಾಡುವ ಮಕ್ಕಳು ಇದ್ದರೇನು ಸತ್ತರೇನು. ಒಂದಂತು ನಿಜ . ನಮ್ಮ ಜೀವನದ ಪ್ರತಿಯೊಂದು ಕ್ಷಣದಲ್ಲಿ ಏನಾದರೊಂದು ಹೊಸತನ ಕಾಯುತ್ತಲೇ ಇರುತ್ತೆ. ಒಂದಾ ಅದು ತಿರುವಿನ ರೂಪದಲ್ಲಿರಬಹುದು, ಅಥವಾ ಬದಲಾವಣೆಯ ರೂಪದಲ್ಲಿರಬಹುದು ಅಥವಾ ಪರಿಪಾಠದ ರೂಪದಲ್ಲಿರಬಹುದು. ನಾವು ಪ್ರತಿಯೊಬ್ಬರ ಜೀವನವನ್ನು ಅರ್ಥೈಸುವಲ್ಲಿ ವಿಫಲರಾಗಬಾರದು. ಅವರನ್ನು ಅರ್ಥೈಸುವ ಮೊದಲೇ ಅವರ ಕುರಿತು ತೀರ್ಮಾನಕ್ಕೆ ಬರಬಾರದು. ಒಂದು ವೇಳೆ ಎಲ್ಲರೂ ಪರಸ್ಪರ ಮನುಷ್ಯರನ್ನು ಅರ್ಥೈಸುವ ಕೆಲಸಗಳನ್ನು ಮಾಡಿದರೆ ದ್ವೇಷ ಅನ್ನುವ ಪದವನ್ನೇ ನಾವು ಅಳಿಸಿ ಹಾಕಬಹುದು.

– ಇಮ್ರಾನ್ ಪಾಂಡವರಕಲ್ಲು

Leave a comment