ನಿಶ್ಯಬ್ದ

Near Bus stand, Madantyar

ಜೀವನದಲ್ಲಿ ಮಿತಿಮೀರಿ ಜಿಗುಪ್ಸೆಗೊಳಪಟ್ಟಾಗ, ಕಾಲಿಕ ನೋವನ್ನು ಅನುಭವಿಸಿದಾಗ, ಭರವಸೆಗಳು ಕುಗ್ಗಿದಾಗ ಇದನ್ನು ಶಮನ ಪಡಿಸುವ ಒಂದು ಕಾರ್ಯವಿಧಾನವಾಗಿದೆ ನಿಶ್ಯಬ್ದ. ಈ ಎಲ್ಲಾ ಸಂಭವಿಸಿದಾಗ ನಿಶ್ಯಬ್ದಕ್ಕೆ ಮರುಗಿರಿ.

Daikinakatte, Punjalkatte

ನಿಶ್ಯಬ್ದ ಅಥವಾ ಮೌನ ಒಂದು ಗುರು. ಮೌನವಾಗಿ ನಾವು ಸಾಧನೆ ಮಾಡಲಾರಂಭಿಸಿದರೆ ನಮಗೆ ಏನು ಬೇಕೋ, ನಾವು ಏನು ಮಾಡಬೇಕೋ ಎಲ್ಲವೂ ನಮಗೇ ಅರ್ಥವಾಗಿ ಹೋಗುತ್ತದೆ.

ಪ್ರತಿದಿನವೂ ಕೊನೆಯ ಪಕ್ಷ ಅರ್ಧಗಂಟೆಯಿಂದ ಸಮಯ ಏಕಾಂತವಾಗಿ ,ಮೌನವಾಗಿ ಕಳೆಯಲು ಪ್ರಾರಂಭಿಸಿ. ಈ ಅರ್ಧಗಂಟೆಯ ಕಾಲ ಮೌನದ ಸಾಧನೆ ಮಾಡಿ. ಈ ಸಮಯದಲ್ಲಿ ಯಾರೊಡನೆಯೂ ಮಾತನಾಡಬೇಡಿ. ಏನೂ ಓದಬೇಡಿ. ಏನೂ ಬರೆಯಬೇಡಿ. ಕಡೆಗೆ ನಿಮ್ಮ ಆಲೋಚನೆಗಳನ್ನು ಕೂಡಾ ನಿಯಂತ್ರಿಸಿಕೊಳ್ಳಿ.

ಈ ಅಭ್ಯಾಸದಲ್ಲಿ ಮೊದಲು ನರಕವೇ ಕಾಣಿಸುತ್ತದೆ. ನರಕದಂತಹ ಅನುಭವ ಆಗುತ್ತದೆ. ಮನಸ್ಸು ಕೋತಿಯಂತೆ ಚಲಿಸುತ್ತಿರುತ್ತದೆ. ‘ ಏಕೆ ಬಂತು ದರಿದ್ರ ಇದೆಲ್ಲಾ?’ ಎಂಬ ಇರಿಟೇಷನ್ ಕೂಡ ಆಗುತ್ತಿರುತ್ತದೆ. ಆದರೆ ಇವೆಲ್ಲಾ ಒಂದು ಮಹಾಯುದ್ಧಕ್ಕೆ ಸನ್ನದ್ಧರಾಗುವ ಮುನ್ನ ಉಂಟಾಗುವ ಅವಾಂತರಗಳು ಮಾತ್ರ. ಅವಾಂತರಗಳು ನಿಮ್ಮನ್ನು ಪರೀಕ್ಷಿಸುತ್ತಾ ಇರಿಟೇಶನ್ ತರುತ್ತಾ ಇರುತ್ತವೆ. ಅವಕ್ಕೆ ನೀವು ತಲೆಬಾಗಿದರೆ ಅಷ್ಟೇ..

ನೀವು ಜಯಗೊಳಿಸಬೇಕಾದರೆ, ನಿಮ್ಮ ತಂದೆ ತಾಯಿ ಹೆಮ್ಮೆ ಪಡಬೇಕಾದರೆ, ನಿಮ್ಮ ಟೀಕಾಕಾರರಿಗೆ ಉತ್ತರ ನೀಡಬೇಕಾದರೆ ನೀವು ಒಂದು ಪ್ರಯತ್ನಗಳ ಮಹಾಯುದ್ಧ ಮಾಡಲೇ ಬೇಕಾಗುತ್ತದೆ. ಆ ಮಹಾಯುದ್ಧ ಬೇರೆ ಯಾರೊಂದಿಗೂ ಅಲ್ಲ. ನಿಮ್ಮೊಂದಿಗೆ ನೀವೇ ಮಾಡುವ ಯುದ್ಧ..

ನಮ್ಮಲ್ಲಿರುವ ಅಜ್ಞಾನ, ಮೂರ್ಖತನ, ನಿರ್ಲಕ್ಷ್ಯತೆ, ಸೋಮಾರಿತನ ಮೊದಲಾದ ನಿಕೃಷ್ಟ ಗುಣಗಳ ಮೇಲೆ ನಾವು ಯುದ್ಧ ಮಾಡಬೇಕಾಗಿದೆ. ಆ ಯುದ್ಧಕ್ಕೆ ಈ ನಿಶ್ಯಬ್ದ, ಮೌನವೇ ನಾಂದಿ ಎಂದು ಹೇಳಬಹುದು.

ನಿಶ್ಯಬ್ದವಾಗಿ ಎರಡು ನಿಮಿಷಗಳು ಕುಳಿತುಕೊಳ್ಳುವುದೇ ಹಿಂಸೆಯಾಗಿರುವಾಗ ಅರ್ಧಗಂಟೆ ಕಾಲ ನಿಶ್ಯಬ್ದವಾಗಿರುವುದು ಸಾಧ್ಯವೇ? ಎನ್ನುವ ಸಂದೇಹ ಬರಬಹುದು. ನಿಸ್ಸಂಶಯವಾಗಿ ಸಾಧ್ಯವಿದೆ. ನಮ್ಮ ಜೀವನದಲ್ಲಿ ಯಾವುದೋ ಒಂದು ಘಟ್ಟದಲ್ಲಿ ಬದಲಾವಣೆ ಪ್ರಾರಂಭವಾಗಬೇಕು. ಬದಲಾವಣೆಯಿಲ್ಲದ ಜೀವನ ಕೆಸರುಗುಂಡಿಯ ನೀರಿನಂತೆ.

ನಿಶ್ಯಬ್ದದೊಳಗಿಂದ ನಿಮಗೆ ಜ್ಞಾನ ದೊರಕುತ್ತದೆ. ನಿಮ್ಮೊಡನೆ ನೀವು ಸಂಭಾಷಣೆ ಮಾಡಬಲ್ಲರಾಗುವಿರಿ. ನೀವು ಏನು ಅನ್ನುವುದನ್ನು ನೀವು ತಿಳಿಯಬಲ್ಲವರಾಗುತ್ತೀರಿ. ನಿಮ್ಮನ್ನು ಕುರಿತು ನಿಮಗೆ ಅರ್ಥವಾಗುವ ವಿಷಯಗಳನ್ನು ತಿಳಿದುಕೊಂಡಾಗ ನೀವೇ ಆಶ್ಚರ್ಯಪಡುವಿರಿ.

ನಿಶ್ಯಬ್ದವೆನ್ನುವುದು ಮಹಾನ್ ವೈದ್ಯ. ನಿಶ್ಯಬ್ದ ದೊಡ್ಡ ಗೈಡ್. ನಿಶ್ಯಬ್ದದಲ್ಲಿ ನಮ್ಮೊಳಗೆ ನಾವು ಪಯಣಿಸಿ ಜೀವನದ ಪರಮಾರ್ಥವನ್ನು ತಿಳಿದುಕೊಳ್ಳಲು ಬಲ್ಲವರಾಗುತ್ತೇವೆ.

ಗೊಂದಲಮಯವಾಗಿ ಟೆನ್ಶನ್ನಲ್ಲಿರುವ ನಮ್ಮ ಮೆದುಳು ಕೆಲಸ ಮಾಡದು. ಅದೇ ನಾವು ಪ್ರಶಾಂತವಾಗಿ, ನೆಮ್ಮದಿಯಾಗಿ ಇದ್ದರೆ ನಮ್ಮ ಶರೀರ, ಮನಸ್ಸು, ಆತ್ಮ ,ಮಿದುಳು ಒಂದೇ ಏನು, ನಮ್ಮ ಎಲ್ಲಾ ಅವಯವಗಳೂ ಕಾರ್ಯಾಚರಿಸುತ್ತದೆ. ನಾವು ಮಾನಸಿಕವಾಗಿ ಯಾವಾಗಲೂ ಪ್ರಶಾಂತವಾಗಿರುವುದನ್ನು ರೂಢಿಯಾಗಿಸಬೇಕು. ಅದು ಯಾವುದೇ ಸಮಸ್ಯೆಗಳಿರಲಿ, ಗೊಂದಲಗಳಿರಲಿ. ಸಮಸ್ಯೆಗಳಲ್ಲಿಯೇ ಪರಿಹಾರ ನಮಗೆ ನಾವು ಮೌನವಾಗಿ ದೂರಾಲೋಚನೆ ಮಾಡಿದಾಗ ಲಭಿಸುತ್ತದೆ.

– ಇಮ್ರಾನ್ ಪಾಂಡವರಕಲ್ಲು ಹಾಗೂ ಸಂಗ್ರಹ ಬರಹ

Leave a comment