

ಮನುಷ್ಯ ಕಳೆದ ಶತಮಾನದಲ್ಲಿ ಎಷ್ಟೋ ಅದ್ಭುತ ವಿಜಯಗಳನ್ನು ಕೈವಶ ಮಾಡಿಕೊಂಡಿದ್ದಾನೆ. ಚಂದ್ರನ ಮೇಲೆ ಕಾಲಿರಿಸಿದ್ದಾನೆ. ಅಲ್ಲಿಯವರೆಗೂ ಬಾಧಿಸುತ್ತಿದ್ದ ಹಲವಾರು ಭ್ರಾಂತಿಗಳನ್ನು ದೂರ ಮಾಡಿಕೊಂಡಿದ್ದಾನೆ. ಅಂತರಿಕ್ಷದಿಂದ ಹಿಡಿದು ಅಮೀಬಾದವರೆಗೆ, ಕಂಪ್ಯೂಟರ್ನಿಂದ ಬಯೋಟಕ್ನಾಲೆಜಿ, ಕ್ಲೋನಿಂಗ್ ವರೆಗೆ ಮನುಷ್ಯ ನಿರಂತರವಾಗಿ ಎಷ್ಟೋ ವಿಜಯಗಳನ್ನು ಸಾಧಿಸುತ್ತಾ ಮುಂದೆ ಸಾಗುತ್ತಲೇ ಇದ್ದಾನೆ. ಸಂಚಲನ ಸೃಷ್ಟಿಸುತ್ತಲೇ ಇದ್ದಾನೆ.
ಆದರೆ ಮನುಷ್ಯ ನಿಜವಾಗಿ ಆನಂದದಿಂದ , ಸಂತೃಪ್ತಿಯಿಂದ ಇರಬಲ್ಲವನಾಗಿದ್ದಾನೆಯೇ? ಇಲ್ಲ. ಅದಕ್ಕೆ ಕಾರಣವೇನು? ಅದಕ್ಕೆ ಮನುಷ್ಯ ಎಲ್ಲಿವರೆಗೆ ಹೊಣೆಗಾರ? ನೂರಕ್ಕೆ ನೂರು ಮನುಷ್ಯನೇ ಹೊಣೆಗಾರ. ನಮ್ಮ ದುಃಖಗಳಿಗೆ ನಮ್ಮ ಅಜ್ಞಾನವೇ ಕಾರಣ. ಅಜ್ಞಾನದ ದೆಸೆಯಿಂದಲೇ ನಮಗೆ ದುಃಖಗಳು ಒದಗಿ ಬರುತ್ತವೆಂಬ ತಿಳುವಳಿಕೆ ಇಲ್ಲದಿರುವುದೇ ಭಯಂಕರವಾದ ಅಜ್ಞಾನದ ತುತ್ತತುದಿ. ಮನುಷ್ಯ ಎಷ್ಟು ಸಾಧಿಸಿದರೂ, ಎಷ್ಟು ಜಯಿಸಿದರೂ ಒಂದು ವಿಷಯದಲ್ಲಿ ಮಾತ್ರ ಯಾವಾಗಲೂ ಸೋಲುತ್ತಲೇ ಇದ್ದಾನೆ.



ಅದೇನೆಂದರೆ ತನ್ನ ಕುರಿತು ತಾನು ತಿಳಿದುಕೊಳ್ಳದೇ ಇರುವುದು. ಸೈಕಾಲಜಿ ಬೇರೆ, ಜ್ಞಾನ ಬೇರೆ. ಸೈಕಾಲಜಿ ವಿವಿಧ ಬಗೆಯ ಮನುಷ್ಯರ ವರ್ತನೆಯ ಬಗ್ಗೆ ಹೇಳುತ್ತದೆ. ಹಲವು ವಿಶ್ಲೇಷಣೆಗಳೂ ನೀಡುತ್ತದೆ. ಆದರೆ ವಿಷ್ಲೇಷಣೆಗಳು ಮಾತ್ರ ಸಾಕಾಗದು ಅಲ್ಲವೇ. ಕಲಿತುಕೊಂಡ ಆಚರಣೆಯಲ್ಲಿ ತರುವುದೇ ನಿಜವಾದ ಜ್ಞಾನ.
ಎಲ್ಲಾ ರಂದಗದಲ್ಲೂ ಅಷ್ಟೇ, ಒಳಿತು ಕೆಡುಕು ಎರಡೂ ಇರುತ್ತದೆ. ನೆಗೆಟಿವ್ ಯೋಚನೆ ಮಾಡದೆ ಪಾಸಿಟಿವ್ ಆಲೋಚನೆಗಳೊಂದಿಗೆ ಮುನ್ನಡೆದರೆ ಜೀವನದ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ನಾವು ಬೆಳೆಯಲಾಗುತ್ತಿಲ್ಲ ಎಂದರೆ ಆ ತಪ್ಪು ನಮ್ಮದೇ ವಿನಃ ಇತರರದ್ದಲ್ಲ. ನಾವು ಯಸ್ವಿಯಾಗಲಾರದೇ ಇತರರು ಯಶಸ್ವಿ ಆಗುತ್ತಿದ್ದರೆ ಸಹಿಸಲಾರದೆ ಅಸೂಯೆಯಿಂದ ಸೊರಗುವುದು ಅತ್ಯಂತ ಪ್ರಮಾದಕರ. ಅಸೂಯೆ ದ್ವೇಷಗಳೆಂಬ ಲಕ್ಷಣಗಳಿಂದ ನೀವು ಬಳಲುತ್ತಿರುವುದಾದರೆ ಬಹುಬೇಗ ನೀವು ಶಾರೀರಿಕ, ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಂದು ಅರ್ಥ.
ಇತರರ ಮೇಲಿನ ದ್ವೇಷದಿಂದ ನಿಮ್ಮ ಸಮಾಧಿಯನ್ನು ನೀವೇ ತೋಡಿಕೊಳ್ಳುತ್ತಿರುವಿರಿ. ದ್ವೇಷ, ಹಗೆತನ, ಅಸೂಯೆಯಂತಹ ನೆಗೆಟಿವ್ ಭಾವೋದ್ವೇಗಗಳ ಕಾರಣದಿಂದ ನಿಮ್ಮ ಶರೀರದಲ್ಲಿ ಅನಗತ್ಯ ಆಮ್ಲಗಳ ಉತ್ಪಾದನೆ ಹೆಚ್ಚಾಗುತ್ತದೆ. ಅದರಿಂದ ನೀವು ಬಿ.ಪಿ, ಅಲ್ಸರ್, ಗ್ಯಾಸ್ಟ್ರಿಕ್, ಹೃದಯ ರೋಗಗಳಿಂದ ನೀವು ನರಕ ಅನುಭವಿಸಬೇಕಾಗುತ್ತದೆ.
ಇತರರ ವಿಷಯ ನಿಮಗೇಕೆ? ನಿಮಗೆ ಸಾಧ್ಯವಾದರೆ ಇತರರಿಗೆ ಸಹಾಯ ಮಾಡಿ. ಇಲ್ಲವೇ ಅವರನ್ನು ಹುರಿದುಂಬಿಸಿ. ಇಲ್ಲವೇ ಅವರನ್ನು ಅವರಷ್ಟರ ಮಟ್ಟಿಗೆ ಬಿಟ್ಟುಬಿಡಿ. ನೀವು ಮಾತ್ರ ಪಾಸಿಟಿವ್ ಆಲೋಚನಾ ಧೋರಣೆಯೊಂದಿಗೆ ಪ್ರಯತ್ನ ಮಾಡುತ್ತಾ ಮುಂದೆ ಸಾಗಿ. ಈ ಪ್ರಪಂಚದಲ್ಲಿ ಯಾರೂ ಯಾರಿಗೂ ಈಡಲ್ಲ. ಯಾರಲ್ಲಿ ಸತ್ವವಿದೆಯೋ ಅವರೇ ಎದ್ದು ನಿಲ್ಲುತ್ತಾರೆ. ಸತ್ವವಿಲ್ಲದ ವ್ಯಕ್ತಿ ಬಹುಬೇಗ ಹಿಂದೆ ಬೀಳುವುದನ್ನು ನಾವು ಎಲ್ಲ ರಂಗಗಳಲ್ಲಿಯೂ ನೋಡುತ್ತಲೇ ಇದ್ದೇವೆಲ್ಲವೇ..ವಿಜೇತರನ್ನು ಪರಿಶೀಲಿಸಿದರೆ ಅವರು ದಶಕಗಳ ಕಾಲ ಅದೇ ಉತ್ಸಾಹ, ಎನರ್ಜಿಗಳಿಂದ ಶ್ರಮ ಮಾಡುತ್ತಲೇ ಇದ್ದಾರೆ. ಜಯ ಗಳಿಸುತ್ತಲೇ ಇದ್ದಾರೆ. ಅವರಿಗೆ ಇಷ್ಟು ಎನರ್ಜಿ ಎಲ್ಲಿಂದ ಬಂತು?
ಪಾಸಿಟಿವ್ ಆಲೋಚನೆಗಳ ಕಾರಣದಿಂದಲೇ ಅವರಿಗೆ ಆ ಎನರ್ಜಿ ಬರುತ್ತದೆ. ನೆಗೆಟಿವ್ ಆಲೋಚನೆಗಳನ್ನು ದೂರವಿಡುವುದರಿಂದಲೇ ಅವರಿಗೆ ಆ ಎನರ್ಜಿ ಬರುತ್ತದೆ. ಚುನಾವಣೆಗಳಲ್ಲಿ ಘೋರ ಪರಾಜಯ ಅನುಭವದ ರಾಜಕೀಯ ಪಾರ್ಟಿಗಳು ತಮ್ಮ ಆಲೋಚನಾ ವಿಧಾನ ಬದಲಾಯಿಸಿಕೊಂಡು ಜನಗಳ ಮುಂದೆ ಹೋಗುತ್ತವೆ. ರಿಸಲ್ಟ್ ಫಲಿಸದಿದ್ದ ಸೈಂಟಿಸ್ಟ್ ತನ್ನ ಆಲೋಚನಾ ವಿಧಾನವನ್ನು ಮಾರ್ಪಾಟು ಮಾಡಿಕೊಳ್ಳುತ್ತಾನೆ.ತಾನು ಚಿತ್ರಕತೆ ಬರೆದ ಸಿನಿಮಾ ಫೇಲ್ ಆದರೆ ಲೇಖಕ ತನ್ನ ಆಲೋಚನಾ ವಿಧಾನವನ್ನು ಮಾರ್ಪಾಟು ಮಾಡುತ್ತಾನೆ.
ಇದಾಗಿದೆ ಜೀವನದ ನೈಜ ಅರ್ಥ. ಒಮ್ಮೆ ಸೋಲನುಭವಿಸಿದರೆ ಅದರ ಆಳ ಮತ್ತು ಅಗಲದಲ್ಲಿಯೇ ಕೊರಗಿಯೇ ನಾವು ದಿನದೂಡುತ್ತೇವೆ. ಇದರಿಂದ ನಷ್ಟವೇ ಹೊರತು ಒಂದು ರೂಪಾಯಿಯ ಲಾಭವಿಲ್ಲ. ಒಂದು ದಿನ, ಎರಡು ದಿನ ತಪ್ಪಿದರೆ ಒಂದು ವಾರ. ಇದಕ್ಕಿಂತ ಹೆಚ್ಚು ನಾವು ಕೊರಗಿ ಕುಳಿತರೆ ಜೀವನವು ಅರ್ಧ ಶತಮಾನದಷ್ಟು ಹಿಂದೆ ಹೋಗುತ್ತದೆ. ಜೀವನದಲ್ಲಿ ಕಷ್ಟ ಸುಖಗಳು ಸಾಮಾನ್ಯ. ಅದನ್ನು ಸ್ವೀಕರಿಸುವಲ್ಲಿ ನಾವು ಸಫಲರಾಗಬೇಕು. ಅಷ್ಟೇ.
-ಪ್ರೇರಣಾದಾಯಕ ಬರಹ ಹಾಗೂ ಸಂಗ್ರಹ ಬರಹ